ಇಂದಿನ ಮಕ್ಕಳಿಗೆ ಸಂಸ್ಕೃತಿ–ಸಂಸ್ಕಾರ ಕಲಿಸಿದರೆ ವೃದ್ಧಾಪ್ಯದಲ್ಲಿ ಅವರು ನಮ್ಮನ್ನು ಸಾಕಿ–ಸಲುಹಿಸುತ್ತಾರೆ. ಆದರೆ ಕೇವಲ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಜೋತು ಬಿದ್ದ ಪರಿಣಾಮ, ಕುಟುಂಬ ಮೌಲ್ಯಗಳು ಕ್ಷೀಣಿಸುತ್ತಿದ್ದು, ಅದರ ಪರಿಣಾಮವಾಗಿ ಹಿರಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸಂಯುಕ್ತಾ ಕಳಕಪ್ಪ ಬಂಡಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆ, ಮಾತೋಶ್ರೀ ಯಲ್ಲಮ್ಮ ಸಂಗಪ್ಪ ಕೆಂಗಾರ ಆಂಗ್ಲ ಮಾಧ್ಯಮ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪೇಪರ್ ವಿತರಣೆ ಮಾಡಿ ವಿದ್ಯಾಭ್ಯಾಸ ಮಾಡಿ ವಿಶ್ವಮಟ್ಟದ ವಿಜ್ಞಾನಿಯಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಜೀವನ ಮೌಲ್ಯಗಳು, ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಿ ಅವರನ್ನು ಉನ್ನತಮಟ್ಟಕ್ಕೆ ಕರೆದೊಯ್ಯುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಅವರು ಹೇಳಿದರು.
ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎಸ್. ಕೆಂಗಾರ ಮಾತನಾಡಿ, ಇಂದಿನ ಹದಗೆಟ್ಟ ರಾಜಕೀಯ ಪರಿಸ್ಥಿತಿಯಿಂದ ನಮ್ಮ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು. ಆದರೆ ಆಗ ಶಾಸಕರಾಗಿದ್ದ ಕಳಕಪ್ಪ ಬಂಡಿ ಅವರ ಮುತುವರ್ಜಿಯಿಂದ ಶಾಲೆ ಉಳಿಯಲು ಸಾಧ್ಯವಾಯಿತು. ಶಾಲೆಯ ಸಮಗ್ರ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಅಲ್ಲ, ಪಾಲಕರ ಸಹಕಾರವೂ ಅತ್ಯಂತ ಅಗತ್ಯ ಎಂದರು.
ಲಿಂಗಸೂರು ಮಾಣಿಕೇಶ್ವರಿ ಆಶ್ರಮದ ಮಾತೋಶ್ರೀ ನಂದಿಶ್ವರಿ ಅಮ್ಮನವರು ಮಾತನಾಡಿ, ಎನ್.ಎಸ್. ಕೆಂಗಾರ ಅವರು ಜ್ಞಾನ ದಾಸೋಹದ ಉದ್ದೇಶದಿಂದಲೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅನ್ನದಾಸೋಹ ಯಾರಾದರೂ ಮಾಡಬಹುದು; ಆದರೆ ಜ್ಞಾನ ದಾಸೋಹ ಮಾಡಲು ಗುರುವಿನ ಕೃಪೆ ಅಗತ್ಯ. ಆ ಕೃಪೆ ಇದ್ದಾಗ ಮಾತ್ರ ಸಮಾಜಸೇವೆಯು ಸಾರ್ಥಕವಾಗುತ್ತದೆ ಎಂದು ಹೇಳಿದರು.
ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿ, ಹಿರಿಯರ ಮಾತು ಕೇಳಿದರೆ ಜೀವನದಲ್ಲಿ ಮುತ್ತಿನಂತೆ ಮೆರೆಯುತ್ತೀರಿ. ದಡ್ಡರನ್ನು ದೊಡ್ಡವರನ್ನಾಗಿ ರೂಪಿಸುವುದು ಸಣ್ಣ ಸಣ್ಣ ಶಾಲೆಗಳ ಶಕ್ತಿ. ಜಗತ್ತು ನಿನ್ನನ್ನು ನೋಡುವಂತೆ ನೀ ಬೆಳೆಯಬೇಕು – ಅದೇ ನಿಜವಾದ ಸಾಧನೆ. ಬಂಗಾರವನ್ನು ತಿಪ್ಪೆಯಲ್ಲಿ ಎಸೆದರೂ ಅದರ ಉತ್ಕೃಷ್ಟತೆ ಕಳೆದುಕೊಳ್ಳುವುದಿಲ್ಲ; ಹಾಗೆಯೇ ನಾವು ಯಾವಾಗಲೂ ಉತ್ಕೃಷ್ಟತೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹನಮಂತಪ್ಪ ಕೂಗಲ, ಹುಲ್ಲಪ್ಪ ಕೆಂಗಾರ, ಮಾದೇವಗೌಡ ರಾಯನಗೌಡ್ರ, ಲೀಲಾವತಿ ಸವಣೂರ, ಶಾಂತಾ ಮಾದರ, ಮಲ್ಲಿಕಾರ್ಜುನ ತಳ್ಳಿಹಾಳ, ಈರಣ್ಣ ಕುಸ್ತಿ, ಶರಣಪ್ಪ ಗುಡ್ನೆನ್ನವರ, ಮಾದೇವಗೌಡ ಅಮಾತಿಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
**
ಫೋಟೋ ಕ್ಯಾಪ್ಷನ್ (೩೦ ರೋಣ–೧):
ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆ, ಮಾತೋಶ್ರೀ ಯಲ್ಲಮ್ಮ ಸಂಗಪ್ಪ ಕೆಂಗಾರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮವನ್ನು ಸಂಯುಕ್ತಾ ಕಳಕಪ್ಪ ಬಂಡಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಎನ್.ಎಸ್. ಕೆಂಗಾರ, ಲಿಂಗಸೂರು ಮಾಣಿಕೇಶ್ವರಿ ಆಶ್ರಮದ ಮಾತೋಶ್ರೀ ನಂದಿಶ್ವರಿ ಅಮ್ಮನವರು, ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು, ಲೀಲಾವತಿ ಸವಣೂರ, ಹುಲ್ಲಪ್ಪ ಕೆಂಗಾರ ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ.
